ಮಹಾಮಾರಿ ಕೊರೋಣ ಕಲಿಸಿದ ಹಳ್ಳಿ ಸಂತೆ
Author : Vinayak M Bhat
ವಿನಾಯಕ ಭಟ್ ಹುಲ್ಲಂಬಿ
ವಿಶೇóಷ
2020 ನೇ ಮಾ.30 ದೇಶಕ್ಕೆ ಕರಾಳ ದಿನ. ಪ್ರತಿಯೊಬ್ಬ ಭಾರತೀಯನಿಗೆ ಜೀವನದ ಆತಂಕ, ಭಯ ಸುದ್ದಿ ಮಾಧ್ಯಮಗಳಲ್ಲಿ ಕೇರಳದ ಮೂಲಕ ಮೊದಲ ಪ್ರಕರಣ, ಎಲ್ಲಿ ನೋಡಿದಲ್ಲಿ ಕೋವಿಡ್ 19ರ ಭಯಾನಕ ಚಿತ್ರ. ಇದರ ಮಧ್ಯೆ ಏಕಾಏಕಿ ದೇಶವೇ ಲಾಕ್‍ಡೌನ್, ಹೊರಗೆ ಹೋಗುವಂತಿಲ್ಲ. ಕೊರೋಣ ಪಾಸಿಟಿವ್ ಬಂದಿದೆ ಎಂದರೆ ಆ ಏರಿಯಾಕೆ ದಿಗ್ಬಂಧನ. ಯಾರೂ ಅವರ ಮನೆಗೆ ಹೋಗುವಂತಿಲ್ಲ. ಪಾಸಿಟಿವ ಕಾಣಿಸಿಕೊಂಡವರನ್ನು ಆಂಬ್ಯುಲೆನ್ಸಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಣೆ, ಊಟ ಮಾಡುವಂತಿಲ್ಲ, ಕೊಡುವಂತಿಲ್ಲ, ತರುವಂತಿಲ್ಲ, ಗಗನ ಯಾತ್ರಿಗಳಂತೆ ವೇಷ ಧರಿಸಿದ ಆಸ್ಪತ್ರೆಯ ಸಿಬ್ಬಂದಿ. ಅರ್ಧ ಮುಖ ಕಾಣುವ ಕಡ್ಡಾಯವಾಗಿ ಮಾಸ್ಕ ಧಾರಣೆ, ಸ್ಯಾನಿಟೈಸರ್ ಉಪಯೋಗ, ಇದರೆಲ್ಲದರ ಮಧ್ಯೆ ನಮ್ಮ ಬಂಧು ಬಳಗ, ಸ್ನೇಹಿತರ ವರ್ಗ, ಎಲ್ಲಿ ನೋಡಿದಲ್ಲಿ ಇವತ್ತು ಇದ್ದವರು ನಾಳೆ ಇಲ್ಲ. ಎಷ್ಟೋ ಬಳಗವನ್ನು ಕಳೆದುಕೊಂಡ ಕಹಿ ನೆನಪುಗಳು ಇನ್ನೂ ಮನಸಿನಲ್ಲಿ ಅಚ್ಚಳಿಯದೇ ಉಳಿದಿವೆ.
ಇನ್ನು ಈ ವರದಿಯ ಆಳಕ್ಕೆ ಹೋಗೋಣ. ಹಳ್ಳಿಗಳಿಂದ ಶಹರಗಳು ಬದುಕುತ್ತಿವೆ. ಶಹರಗಳಿಂದ ಹಳ್ಳಿಗಳು ಬದುಕುತ್ತಿಲ್ಲ. ಅಕ್ಷರ ಜ್ಞಾನ ಇರಲಿ, ಬಿಡಲಿ ಜೀವಿಗೆ ಆಹಾರ ಬೇಕೆ ಬೇಕು. ರೈತನಿಗೆ ಕೃಷಿ ಜ್ಞಾನ ಬಿಟ್ಟು ಬೇರೆ ವ್ಯವಹಾರಿಕ ಅನುಭವ ಕಡಿಮೆ. ತಾನು ಬೆಳೆದ ತರಕಾರಿ, ಆಹಾರ ಧಾನ್ಯಗಳು ಹೊಲ ಬಿಟ್ಟು ಬರುವಂತಿಲ್ಲ. ಸಾಗಾಣಿಕೆ ಇಲ್ಲವೇ ಇಲ್ಲ. ಆಗ ಪ್ರಾರಂಭವಾದದ್ದೇ ಈ ದೇವಿಕೊಪ್ಪ ಗ್ರಾಮದ ಹಳ್ಳಿ ಸಂತೆ. ತಾ ಬೆಳೆದ ತರಕಾರಿಗಳನ್ನು ತನ್ನ ಗ್ರಾಮದಲ್ಲೇ ಮಾರಲು ಪ್ರಾರಂಭಿಸಿದ ಈ ಗ್ರಾಮದ ಜನಸಂಖ್ಯೆ 5 ರಿಂದ 5ವರೆ ಸಾವಿರ. ಇದರ ಸುತ್ತಲೂ ದೇವಿಕೊಪ್ಪ ತಾಂಡಾ, ಇಚನಳ್ಳಿ ತಾಂಡಾ, ಗಲಗಿನಕಟ್ಟಿ, ತಂಬೂರ, ಹೀಗೆ ಸುತ್ತ ಮುತ್ತಲಿನ ಹಳ್ಳಿಗಳ ಜನರು ಈ ಸಂತೆಯನ್ನು ಹುಟ್ಟು ಹಾಕಿದರು. ಇದರಿಂದ ಈ ಭಾಗದ ರೈತರು ತಾವು ಬೆಳೆದ ತರಕಾರಿಗಳನ್ನು ತಮ್ಮ ಊರಲ್ಲೇ ಮಾರುವ ವ್ಯವಸ್ಥೆಯಾಗಿ ನೂರಾರು ಯುವಕರು ಉದ್ಯೋಗ ಕಂಡುಕೊಂಡಿದ್ದಾರೆ. ಹತ್ತಿರ ಕಲಘಟಗಿಗೆ ಸಂತೆಗೆ ಹೋಗುವುದಾದರೆ ಸಾರಿಗೆ ಖರ್ಚು ಪ್ರತಿಯೊಬ್ಬನಿಗೆ 20 ರೂ. ಬರುತ್ತಿತ್ತು. 1 ರಿಂದ 1ವರೆ ಸಾವಿರ ಜನ ಈ ಸಂತೆಯಲ್ಲಿ ಪಾಲ್ಗೊಳ್ಳುತ್ತಾರೆ. ಸರಾಸರಿ 30 ಸಾವಿರ ರೂ. ಈ ಭಾಗದ ರೈತ ವರ್ಗಕ್ಕೆ ಉಳಿತಾಯವಾಗಿದೆ. ಈ ಸಂತೆಯ ಸಮಯ ಪ್ರತಿ ಮಂಗಳವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ. ಕನಿಷ್ಟವೆಂದರೂ 2 ರಿಂದ 3 ಲಕ್ಷ ವಹಿವಾಟು ಆಗುತ್ತದೆ. ಸಮಯವೂ ಉಳಿಯಿತು, ನಿತ್ಯ ಜೀವನಕ್ಕೆ ಆಧಾರ ಮಾಡಿಕೊಂಡಿದ್ದಾರೆ. ಗ್ರಾಮಸ್ಥರೆಲ್ಲ ಸೇರಿ ಈ ಸಂತೆ ನಡೆಯುವ ಜಾಗವನ್ನು ಗ್ರಾಮ ದೇವಿ ದೇವಸ್ಥಾನಕ್ಕೆ ಖರೀದಿ ಹಿಡಿದುಕೊಂಡಿದ್ದಾರೆ. ಅಂದು ಕಷ್ಟ ಸಮಯದಲ್ಲಿ ಪ್ರಾರಂಭಿಸಿದ ಈ ಸಂತೆಯು ಇಂದು ಎಲ್ಲರ ಸಹಕಾರದಿಂದ ಬೆಳೆಯುತ್ತಿದೆ. ಗ್ರಾಮದ ಅಭಿವೃದ್ಧಿಗಾಗಿ ಸಂತೆಯ ದಿನದಂದು ಅಂಗಡಿ ಹಚ್ಚಿದಾಗ 30 ರೂ. ಕರ ಆಕರಣೆ ಮಾಡುತ್ತಾರೆ. ಇದೇ ರೀತಿ ತಾಲೂಕಿನ ಶಿಗ್ಗಟ್ಟಿ ತಾಂಡಾ, ಬಸನಕೊಪ್ಪ ಹೀಗೆ ಅನೇಕ ಹಳ್ಳಿಗಳಲ್ಲಿ ಇಂದು ಜನರಿಂದ ಜನರಿಗಾಗಿ ಸಂತೆಗಳು ನಡೆಯುತ್ತಿವೆ. ಇದೇ ಅಲ್ಲವೇ ಕೊರೋಣ ಕಲಿಸಿದ ಹಳ್ಳಿ ಸಂತೆ.














